ಶಿಥಿಲೀಕರಣ
ನೀರು, ಹಿಮ, ರಾಸಾಯನಿಕಗಳು ಮತ್ತು ಬದಲಾಗುತ್ತಿರುವ ತಾಪಗಳಂತಹ ಕಾರ್ಯಭಾರಿಗಳಿಂದ ಶಿಲೆಗಳು ಒಡೆದು ಶಿಥಿಲವಾಗುವ ಕ್ರಿಯೆ(ನೆದೆರಿಂಗ್).

	ಶಿಥಿಲೀಕರಣದಲ್ಲಿ ಎರಡು ವಿಧ: 1. ಭೌತಿಕ ಶಿಥಿಲೀಕರಣ 2. ರಾಸಾಯನಿಕ ಶಿಥಿಲೀಕರಣ.

	ಭೌತಿಕ ಶಿಥಿಲೀಕರಣದಲ್ಲಿ ಶಿಲೆಗಳು ಒಡೆದು ಚೂರಾಗುತ್ತವೆ. ತಾಪ, ಹಿಮ, ಗಾಳಿ, ಸಮುದ್ರದ ಅಲೆ ಮುಂತಾದವುಗಳಿಂದ ಭೌತಿಕ ಶಿಥಿಲೀಕರಣ ಘಟಿಸುತ್ತದೆ.

	ಶುಷ್ಕ ಪ್ರದೇಶಗಳಲ್ಲಿ ಶಿಲೆಗಳು ಹಗಲಿನಲ್ಲಿ ಕಾದು, ರಾತ್ರಿಯಲ್ಲಿ ತಣ್ಣಗಾಗುತ್ತವೆ. ಶಿಲೆ ಕಾದಾಗ ಹಿಗ್ಗುತ್ತದೆ, ತಣ್ಣಗಾದಾಗ ಕುಗ್ಗುತ್ತದೆ. ಇದರಿಂದಾಗಿ ಶಿಲೆಗಳಲ್ಲಿ ಬಿರುಕುಗಳುಂಟಾಗಿ ಕ್ರಮೇಣ ಒಡೆದು ಚೂರಾಗುತ್ತದೆ. ಅದು ಕಣಕಣಗಳಾಗಿ ಶಿಥಿಲವಾಗಬಹುದು ಇಲ್ಲವೆ ಪದರಪದರವಾಗಿ ಶಿಥಿಲವಾಗಬಹುದು. ಶೀತ ಪ್ರದೇಶಗಳಲ್ಲಿ ಶಿಲೆಗಳ ಸಂದುಗಳಲ್ಲಿ ಶೇಖರವಾದ ನೀರು ರಾತ್ರಿಯಲ್ಲಿ ತಾಪ ಕಡಿಮೆಯಾದಾಗ ಘನೀಭವಿಸುತ್ತದೆ. ಅನಂತರ ಹಗಲಿನಲ್ಲಿ ಬಾಷ್ಪೀಕರಣಕ್ಕೆ ಗುರಿಯಾಗುತ್ತದೆ. ಹೀಗೆ ಬಿರುಕುಗಳು ಹಿಗ್ಗಿಕುಗ್ಗುವುದರಿಂದ ಶಿಲೆಗಳು ಒಡೆದು ಚೂರಾಗುತ್ತವೆ. ಮರುಭೂಮಿ ಅಥವಾ ಒಣಹವೆಯ ಪ್ರದೇಶದಲ್ಲಿ ರಭಸವಾಗಿ ಬೀಸುವ ಗಾಳಿ ತನ್ನ ಜತೆಯಲ್ಲಿ ತಂದ ಮರಳಿನ ಕಣಗಳನ್ನು ಬಂಡೆಗಳಿಗೆ ಬಡಿಯುತ್ತದೆ. ಈ ರೀತಿಯ ಸತತ ಬಡಿತದಿಂದ ದೊಡ್ಡ ಶಿಲೆಗಳು ಚೂರಾಗುತ್ತವೆ. ಸಮುದ್ರ ತೀರಗಳಲ್ಲಿ ಅಲೆಗಳು ಬಂಡೆಗಳಿಗೆ ಬಡಿಯುತ್ತಲೇ ಇರುತ್ತವೆ. ಈ ಸತತ ಸಂಘರ್ಷದಿಂದಲೂ ಶಿಲೆಗಳು ಒಡೆಯುತ್ತವೆ. ಶಿಲೆ ಖನಿಜಗಳ ಮಿಶ್ರಣ. ಅವು ರಾಸಾಯನಿಕ ವಸ್ತುಗಳ ಜತೆ ಸೇರಿದಾಗ ರಾಸಾಯನಿಕ ಕ್ರಿಯೆ ನಡೆದು ಶಿಲೆ ಛಿದ್ರ ಛಿದ್ರವಾಗುವುದೇ ರಾಸಾಯನಿಕ ಶಿಥಿಲೀಕರಣ. ಆಕ್ಸಿಜನ್, ಇಂಗಾಲದ ಡೈ ಆಕ್ಸೈಡ್ ಮತ್ತು ಮಳೆಯ ನೀರು ರಾಸಾಯನಿಕ ಶಿಥಿಲೀಕರಣದಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

	ಕಬ್ಬಿಣದೊಂದಿಗೆ ಆಕ್ಸಿಜನ್ ಸಂಪರ್ಕ ಹೊಂದಿದಾಗ ಕಬ್ಬಿಣದ ಆಕ್ಸೈಡ್ ರೂಪುಗೊಳ್ಳುತ್ತದೆ. ಇದೇ ತುಕ್ಕು ಹಿಡಿಯುವಿಕೆ. ಶಿಲೆಗಳಲ್ಲಿರುವ ಕಬ್ಬಿಣದೊಡನೆ ಆಕ್ಸಿಜನ್ ವರ್ತಿಸಿದಾಗ ಈ ಪ್ರಕ್ರಿಯೆ ನಡೆದು ಶಿಲೆಗಳು ಶಿಥಿಲವಾಗುತ್ತವೆ. ಇದೇ ಆಕ್ಸೀಕರಣ. ಮಳೆಯ ನೀರು ವಾಯುಮಂಡಲದ ಮೂಲಕ ಹಾಯ್ದು ಬರುವಾಗ ಕಾರ್ಬನ್ ಡೈ ಆಕ್ಸೈಡ್‍ನೊಂದಿಗೆ ಮಿಶ್ರಣವಾಗಿ ಸುಣ್ಣಕಲ್ಲು ಪ್ರದೇಶದಲ್ಲಿ ಬಿದ್ದಾಗ ಸುಣ್ಣಕಲ್ಲು ಕರಗುತ್ತದೆ. ಕೆಲವು ಶಿಲೆಗಳು ನೀರು ಹೀರಿಕೊಂಡು ಗಾತ್ರದಲ್ಲಿ ಹಿಗ್ಗುತ್ತವೆ. ಹೀಗೆ ಹಿಗ್ಗಿದಾಗ ಶಿಲೆಗಳು ಶಿಥಿಲವಾಗುತ್ತವೆ. ಇದಕ್ಕೆ ಜಲೀಕರಣ(ಹೈಡ್ರೇಶನ್) ಎನ್ನುತ್ತಾರೆ. ಮಳೆ ನೀರು ವಾಯುಮಂಡಲದಲ್ಲಿ ಹಾಯ್ದುಬರುವಾಗ ಕೆಲವು ಬಗೆಯ ಆಮ್ಲಗಳನ್ನು ತನ್ನ ಜತೆ ತರುತ್ತದೆ. ಈ ಆಮ್ಲ ಪೂರಣ ಜಲಶಿಲೆಯ ಮೇಲೆ ಬಿದ್ದಾಗ ರಾಸಾಯನಿಕ ಕ್ರಿಯೆ ನಡೆದು ಶಿಲೆ ಶಿಥಿಲವಾಗುತ್ತಾ ಹೋಗುತ್ತದೆ. ಇದೇ ದ್ರಾವಣೀಕರಣ.

ಸಸ್ಯಗಳು ಬೆಳೆಯುವಾಗ ಶಿಲೆಗಳ ಬಿರುಕುಗಳಲ್ಲಿ ನುಗ್ಗಿ, ಬಿರುಕುಗಳನ್ನು ದೊಡ್ಡದು ಮಾಡುತ್ತಾ ಹೋದಂತೆ ಶಿಲೆ ಛಿದ್ರಛಿದ್ರವಾಗುತ್ತದೆ. ಕೆಲವೊಮ್ಮೆ ಪ್ರಾಣಿಗಳು ತೋಡುವ ಬಿಲಗಳಿಂದಲೂ ಶಿಲೆಗಳ ಬಂಧ ಸಡಿಲವಾಗಿ ಶಿಲೆ ಛಿದ್ರವಾಗುವುದುಂಟು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

											(ಸಿ.ಎಮ್.)